ನನ್ನೂರ ಬೆಳಗು....... ಸುಗ್ಗಿ ಸಮಯ ಕಣದ ಬಲ ಬದಿಗೆ ರಾಗಿಯ ರಾಶಿ, ಎಡ ಬದಿಯಲ್ಲೊಂದು ಕಡೆ ತೊಗರಿ, ಮತ್ತೊಂದು ಕಡೆ ಅವರೆ. ಆಳೆತ್ತರಕ್ಕೆ ಪೇರಿಸಿಟ್ಟ ಮೊರಗಳು. ಪಕ್ಕದಲ್ಲೆ ಸದಾ ಹರಿವ ಕಾಲುವೆ. ಕಣ್ಣು ಹಾಯಿದಷ್ಟು ದೂರಕ್ಕೂ ಕಾಣುವ ಹಸಿರು. ತೋಟದ ತುಂಬ ತೆಂಗು, ಹಲಸು, ಮಾವು, ಪೇರಲೆ, ಪಪ್ಪಾಯ, ಕಾಡು ಜಿರಂಗಿ ( ರಾಮಫಲ) ಸಪೋಟ, ದಾಳಿಂಬೆ, ನೆಲ್ಲಿ ಮರಗಳ ಜೊತೆಗೆ ಒಡಲ ತುಂಬ ಹೂವು ತುಂಬಿಕೊಂಡು ಬಳುಕುತ್ತ ನಿಂತ ವೈಯ್ಯಾರಿ ಸೇವಂತಿಗೆ ಗಿಡಗಳು. ಒಮ್ಮೆ ಇವನ್ನೆಲ್ಲ ಒಟ್ಟಿಗೆ ಕಂಡರೆ ಏನೋ ಹೆಮ್ಮೆ, ಹೇಳಲಾರದ ಸಂತಸ. ಸುಗ್ಗಿ ಸಮಯದಲ್ಲಿ ಮನೆ ಮಂದಿ ಎಲ್ಲ ಹೊಲದಲ್ಲಿ ಮಲಗುವುದು ವಾಡಿಕೆ. ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಹೊಲದಿಂದ ಮನೆಗೆ ಅದೂ ತಾತನ ಜೊತೆ ಹೋಗಬೇಕಾದರೆ ಆ ಮೈಕೊರೆವ ಛಳಿ, ಒಂದೆ ಸಮನೆ ಬಿಸೋ ಸುಳಿರ್ಗಾಳಿಯಲಿ ದಂಡಿ ಯಾತ್ರೆಯ ಕಥೆ( ಎಷ್ಟಾದರೂ ಗಾಂಧೀಜಿಯ ಪರಮ ಭಕ್ತ ) ಹೇಳ್ತಾ ಹೋಗುತ್ತಿದ್ದರು(ಓಡುತ್ತಿದ್ದರು. ಅವರ ನಡಿಗೆ ನನ್ನ ಓಟ) ನನಗೊ ಮನಸ್ಸು ಪೂರ ದಾರಿಯಲ್ಲಿ ಸಿಗುವ ಎಲಚೆ ಮರದಲ್ಲಿ ಸಿಗುವ ಎಲಚೆ ಹಣ್ಣುಗಳ ಹೆಕ್ಕುವ ಚಿಂತೆ. ಮನವನರಿಯವರಂತೆ ಮರ ಬರುತ್ತಿದ್ದಂತೆ ಹಣ್ಣಗಳು ತುಂಬಿದ್ದ ಕೊಂಬೆಯ ಕೆಳಗೆ ಪಂಚೆ ಹಾಸಿ ನಿರ್ಧಾರಕ್ಕೆ ಮರವ ಹತ್ತಿ ಕೊಂಬೆಯನೊಮ್ಮೆ ಅಲುಗಿಸಿದರೆ ಆ ದಿನದ ಬಹು ಮುಖ್ಯವಾದ ಕೆಲಸ ಮುಗಿಸಿದ ಹೆಮ್ಮೆ ಅವರಿಗೆ. ಗೆಳತಿಯರೊಡನೆ ಹಂಚಿ ತಿನ್ನುವ ಸಂಭ್ರಮ ನನಗೆ. ತತ್..... ...