ಅವನು
ರಾತ್ರಿ ಪೂರ ನನ್ನ ರೂಮ್ ಕ್ಲೀನ್ ಮಾಡುವ ಹಠಕ್ಕೆ ಬಿದ್ದವಳಂತೆ ಎಲ್ಲವನ್ನೂ ಹರಡಿಕೊಂಡಿದ್ದೆ. ಬೆಡ್ ಮೇಲಿದ್ದ ನಾಲ್ಕು ಪುಸ್ತಕಗಳನ್ನು ಅವುಗಳ ಸ್ವಸ್ಥಾನದಲ್ಲಿರಿಸಿದರೆ ಕೆಲಸ ಮುಗಿಯುತ್ತಿತ್ತು. ಹಾಗೆ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. "ಬಳ್ಳಿಕಾಳಬೆಳ್ಳಿ" ಇತ್ತೀಚೆಗೆ ಓದಿ ಮುಗಿಸಿದ್ದೆನಾದರೂ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. "ಉರಿಯ ನಾಲಗೆ" ನಂದಿನಿ ಈ ಪುಸ್ತಕ ಓದು ಅಂತ ಕೊಟ್ಟ ಎರಡು ವರ್ಷಗಳೆ ಕಳೆದಿವೆ ಆದರೂ ಓದುವ ಘಳಿಗೆ ಕೂಡಿ ಬಂದಿರಲಿಲ್ಲ. "ಮಿಸಳ್ ಭಾಜಿ" ಈ ಪುಸ್ತಕ ಒಂಥರಾ ನನ್ನ ಸಂಗಾತಿ ದಿನವೂ ಪಕ್ಕದಲ್ಲಿರಲೆಬೇಕು. ನಾಲ್ಕನೆಯ ಪುಸ್ತಕದ "ಈ ಗುಲಾಬಿಯು ನಿನಗಾಗಿ........." ಪುಸ್ತಕ ಹೆಸರು ನೋಡಿತ್ತಿದ್ದಂತೆ ಮನದಳಾದಲ್ಲೆಲ್ಲೊ ಹುದುಗಿ ಹೋಗಿದ್ದ ಅವನ ನೆನಪುಗಳು ಧುತ್ತನೆ ಎದ್ದು ನಿಂತವು. ಅರೆ ಕ್ಷಣದಲ್ಲೆ ಮನವನ್ನು ಆವರಿಸಿದ. ನನ್ನನ್ನೆ ಕಾಡುತ್ತಿದ್ದವನ ನೋಡುವ ಮನಸ್ಸಾಗಿ ಫೇಸ್ಬುಕ್ ಓಪನ್ ಮಾಡಿ ಅವನ ವಾಲ್ ನೋಡಿದೆ. ಇಂದು ಬೆಳಗ್ಗೆ ತಾನೆ ಲೈವ್ ಬಂದಿದ್ದಾನೆ, ಅದು ಮಾಂಗಲ್ಯ ಧಾರಣೆಯ ಸಂದರ್ಭದಲ್ಲಿ ಏನೋ ತಿಳಿಯದ ನೋವು. ಮದುಮಗನ ಮುಖ ಸರಿಯಾಗಿ ಕಾಣತ್ತಿಲ್ಲ. ಆತಂಕ ಹೆಚ್ಚಾಯಿತು ಸುಮಾರು ನಾಲ್ಕೈದು ಸಲ ವಿಡಿಯೋ ನೋಡಿದ ಮೇಲೆ ಅವನಲ್ಲ ಎಂದು ಖಾತ್ರಿಯಾಗಿ ಸ್ವಲ್ಪ ನಿರಾಳವಾದೆ. ಹೌದು ಅವನಿಗೆ ಮದುವೆಯಾದರೆ ನಾನೇಕೆ ನೋವು ಅನುಭವಿಸಬೇಕು?? ನನ್ನನ್ನು ನಾನೆ ಕೇಳಿಕೊಂಡೆ ಉತ್ತರವಿರಲಿಲ್ಲ. ಬಾಲ್ಕನಿಯಿಂದ ನಿಧಾನವಾಗಿ ತಂಗಾಳಿ ಬೀಸುತ್ತಿತ್ತು. ಹೊರಗೆ ಸಣ್ಣಗೆ ಹನಿಯುತ್ತಿತ್ತು. ಹಾಗೆ ಇರಲಾಗಲಿಲ್ಲ ನಿಧಾನವಾಗಿ ಅಮ್ಮನಿಗೆ ಎಚ್ಚರವಾಗದಂತೆ ಎದ್ದು ಟೆರೇಸ್ಸಿಗೆ ನಡೆದೆ ನಾಲ್ಕನೆ ಮಹಡಿಯಲ್ಲಿದ್ದ ಒಂಟಿ ಮನೆಯ ಮೇಲೆ ಹತ್ತಿ ಕಾಲುಗಳನ್ನು ಇಳಿಬಿಟ್ಟು ಕುಳಿತೆ. ಪಕ್ಕದಲ್ಲಿ ಅವನೆ ಬಂದು ಕುಳಿತಂತೆ ಅನ್ನಿಸಿತು. ನೋವು ತಾಳಲಾರದೆ ಅವನ ಭುಜಕ್ಕೊರಗಿ ಜೋರಾಗಿ ಅಳುತ್ತಿದ್ದೆ! ಮನಸ್ಸು ಆರು ವರ್ಷಗಳ ಹಿಂದೆ ಓಡಿತ್ತು. ಪದವಿಯ ಕಡೆ ವರ್ಷವದು, ಕಾಲೇಜಿನಲ್ಲಿದ್ದ ಹುಡುಗರೆಲ್ಲರಿಗಿಂತ ಪ್ರವೀಣ್ ಜೊತೆ ತುಸು ಹೆಚ್ಚೆ ಸಲಿಗೆಯಿಂದಿದ್ದೆ. ಆದರೂ ನನ್ನ ಮಿತಿಗಳನ್ನು ಎಂದೂ ಮೀರಿರಲಿಲ್ಲ. We are Just Friends ಎನ್ನುವ ಭಾವನೆ ನನ್ನಲ್ಲಿ ಬಲವಾಗಿ ತಳವೂರಿತ್ತು. ಅದೊಂದು ದಿನ ಓಡುತ್ತ ಬಂದವನು, ನಾಲ್ಕು ಪುಸ್ತಕಗಳನ್ನು ಆತುರಾತುರವಾಗಿ ಕೈಗಿಟ್ಟು ಈ ಪುಸ್ತಕಗಳನ್ನು ಮರಿದೆ ಓದು ಎಂದು ಹೇಳಿ ಹೊರಟುಬಿಟ್ಟ.
ಚಿತಾದಂತ, ಕಪ್ಪಂಚು ಬಿಳಿ ಸೀರೆ, ಮಾಂಡೋವಿ ಮತ್ತು ಈ ಗುಲಾಬಿಯು ನಿನಗಾಗಿ. ಮನೆಗೆ ಬಂದವಳೆ ಚಿತಾದಂತ ಓದಿ ಮುಗಿಸಿದ್ದೆ. ಬುದ್ಧನೆ ಆವರಿಸಿದ್ದ ಮನೆ, ಮನದ ತುಂಬ. ವಾರದ ನಂತರ ಬಂದವನು "ನಾ ಕೊಟ್ಟ ಪುಸ್ತಕ ಓದಿದ್ಯಾ?" ಅಂದ. ಇಲ್ಲ ಕಣೋ ಚಿತಾದಂತ ಒಂದೆ ಓದಿದ್ದು. ಟೈಮ್ ಸಿಗ್ಲಿಲ್ಲ ಅಂತಂದೆ. ಓಹ್.... ಹೌದಾ ಅಂದವನ ಮುಖದಲ್ಲಿ ನಿರಾಸೆ ತುಂಬಿತ್ತು. ಓಯ್ ಏನಾಯ್ತೊ ಮಾರಾಯ ಅದು ಜಸ್ಟ್ ಬುಕ್ಸ್ ಏನೋ ನಿನ್ ಮನ್ಸೆ ಕೊಟ್ಟಿದಿಯ ಅನ್ನೊ ಹಾಗಾಡ್ಬೇಡ ಅಂತಂದು ಕ್ಲಾಸ್ ಗೆ ಹೋದೆ. ಸಂಜೆ ಸಮಯವಾದದ್ದರಿಂದ ಈ ಗುಲಾಬಿಯು ನಿನಗಾಗಿ ಓದ್ತಾ ಕುಳಿತೆ. ವಿಶೇಷವೇನು ಅನ್ನಿಸಲಿಲ್ಲ, ಕಡೆಯ ಎರಡು ಪುಟಗಳು ಮಾತ್ರ ಅವನ ಕೈಬರಹವಾಗಿತ್ತು. ಅದನ್ನು ಓದಿದ ಕ್ಷಣ ಕೋಪ ಬಂತಾದರೂ, ಅವನ ಪ್ರೀತಿಯ ನೀವೆದಯನ್ನ ನಿರಾಕರಿಸಲು ಕಾರಣವೇನು ಇರಲಿಲ್ಲ. ಹಾಗೆ ಒಪ್ಪಿಕೊಳ್ಳಲೂ ಸಹ. ಅವನ ಪತ್ರವನ್ನು ಓದಿ ಓದದವಳಂತೆ ಇದ್ದೆ , ಆದರೆ ಮನದಲ್ಲಿ ಅವನು ನೆಟ್ಟಿದ್ದ ಪ್ರೀತಿಯ ಗಿಡ ಚಿಗುರೊಡೆಯ ತೊಡಗಿತು. ಕಾಲೇಜು ವಾರ್ಷಿಕೋತ್ಸವದ ದಿನ ಎಲ್ಲರ ಮುಂದೆ ತನ್ನ ಪ್ರೇಮ ನಿವೇದನೆ ಮಾಡಿದಾಗ, ನಾನೂ ಹರುಷದಿಂದಲೆ ಒಪ್ಪಿಕೊಂಡಿದ್ದೆ. ಒಬ್ಬರನ್ನೊಬ್ಬರು ಅರಿತಿದ್ದೆವಾದರೂ ಅವನಲ್ಲಿದ್ದ ಏಕೈಕ ಲೋಪ ಹೇಳಿದವರ ಮಾತನ್ನು ಹಿಂದು ಮುಂದು ಯೋಚಿಸದೆ ನಂಬುವುದು. ಆದರೆ ಅದೆ ಮುಂದೆ ನಮ್ಮಿಬ್ಬರ ಸಂಬಂಧದ ಅಳಿವಿನಂಚಿಗೆ ತಂದು ನಿಲ್ಲಿಸುವುದೆಂಬ ಅರಿವು ಇಬ್ಬರಿಗೂ ಇರಲಿಲ್ಲ. ಪದವಿ ಮುಗಿಯುತ್ತಲೆ ಕಾರಣಾಂತರಗಳಿಂದ ಅವನು ಓದು ಮುಂದುವಲಿಸಲಾರದೆ ಪ್ರತಿಷ್ಠಿತ MNC ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ. ಅವನ ಬಿಟ್ಟಿರಲಾರದೆ ಮನೆಯವರ ವಿರೋಧದ ನಡವೆಯೂ ನಾನೂ ಅಲ್ಲೆ ಕೆಲಸಕ್ಕೆ ಸೇರಿದೆ. ಎಲ್ಲವೂ ಸರಿಯಾಗಿಯೇ ಇತ್ತು. ಮನೆಯಲ್ಲಿ ನಮ್ಮ ವಿಷಯ ತಿಳಿಸುವ ನಿರ್ಧಾರಕ್ಕೆ ಬಂದಿದ್ದೆವು. ನಮ್ಮಿಬ್ಬರನ್ನೂ ನೋಡಿ ಅಸೂಯೆ ಪಡುತ್ತಿದ್ದ ಪವಿತ್ರ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಅವನ ಕಿವಿ ತುಂಬಿದಳು. ಅವನ ವರ್ತನೆಯೆ ಬದಲಾಗಿತ್ತು. ಯಾರೊಂದಿಗೂ ನಗುತ್ತ ಮಾತನಾಡುವಂತಿರಲಿಲ್ಲ, ಎಲ್ಲರೊಂದಿಗೆ ಬೆರೆಯುವಂತಿರಲಿಲ್ಲ. ಅವನ ಪ್ರೀತಿಯ ಮುಂದೆ ಇದ್ಯಾವುದು ಹೆಚ್ಚು ಅನ್ನಿಸಲೆ ಇಲ್ಲ. ಒಮ್ಮೆ ಆಫೀಸಿಗೆ ಲೇಟಾಯಿತೆಂದು ಅತ್ತೆಯ ಮಗನೆ ಆಫೀಸಿಗೆ ಡ್ರಾಪ್ ಮಾಡಿದ್ದ. ಅದೇ ದಿನ ಅಮ್ಮನಿಗೆ ಹುಷಾರಿಲ್ಲವೆಂದು ಅರ್ಧ ದಿನಕ್ಕೆ ಬಂದು ಕರೆದುಕೊಂಡು ಹೋದ ಇದಿಷ್ಟೇ ಸಾಕಿತ್ತು ಪವಿತ್ರಳಿಗೆ ನಮ್ಮಿಬ್ಬರನ್ನು ದೂರ ಮಾಡಲು. ವಾರದ ನಂತರ ಆಫೀಸಿಗೆ ಬಂದ ನನಗಾಗಿ ಪತ್ರವೊಂದು ಕಾದಿತ್ತು. ನನಗೇನೂ ಹೇಳದೆ, ನನ್ನನ್ನು ಏನು ಕೇಳದೆ. ಸಂಬಂಧ ಕಡಿದುಕೊಂಡು ಮುಂಬೈಗೆ ಹೊರಟುಹೋಗಿದ್ದ. ಆ ನಂತರ ಲೆಕ್ಕವಿಲ್ಲದಷ್ಟು ಸಲ ಅವನಿಗೆ ಕರೆ ಮಾಡಿದ್ದೆ, ಭೇಟಿಯಾಗಲು ಪ್ರಯತ್ನಿಸಿದ್ದೆನಾದರೂ ಪ್ರಯೋಜನವಾಗಲಿಲ್ಲ. ಇದೆಲ್ಲದರ ನಂತರ ಸತತ ಎರಡು ವರ್ಷಗಳೆ ಹಿಡಿಯಿತು ಅವನ ನೆನಪುಗಳಿಂದ ಹೊರಬಂದು ಮೊದಲಿನಂತಾಗಿದ್ದೆ ಆದರೂ ಇಂದು ಆ ಪುಸ್ತಕವನ್ನು ಮತ್ತೆ ಕಂಡಾಗ ಮನದ ಮೇಲಿನ ಹಿಡಿತ ಕಳೆದು ಕೊಂಡಿದ್ದೆ. ಅಷ್ಟರಲ್ಲಾಗಲೆ ಮಳೆ ಜೋರಾಗಿತ್ತು. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ ಅವನೆಂದು ಭಾವಿಸಿ ಒರಗಿದ್ದ ಮರದ ತುಂಡು ಸಡಿಲವಾಗಿ ಜಾರಿತ್ತು. ಅದರ ಜೊತೆಗೆ ನಾನೂ ಮೇಲಿಂದ ಕೆಳಗೆ ಬಿದ್ದಿದ್ದೆ. ಆಸ್ಪತ್ರೆಯಿಂದ ಮನೆಗೆ ಬರುವುದಕ್ಕೆ ಎರಡು ತಿಂಗಳಾಯಿತು. ಸಂಪೂರ್ಣವಾಗಿ ಗುಣಮುಖವಾಗಲು (ದೈಹಿಕವಾಗಿ ಮತ್ತು ಮಾನಸಿಕವಾಗಿ) ಆರು ತಿಂಗಳೆ ಹಿಡಿಯಿತಾದರೂ. ಮತ್ತೆ ಎದ್ದು ಹೊರಟಿರುವೆ ಇನ್ನೆಂದಿಗೂ ಹಿಂತಿರುಗಿ ನೋಡುವುದಿಲ್ಲ ಎಂಬ ಧೃಡ ನಿಶ್ಚಯದೊಂದಿಗೆ.
ವಿ.ಸೂ :- ಕಾಲ್ಪನಿಕ ಕಥೆ

Comments
Post a Comment