ನನ್ನೂರ ಬೆಳಗು.......
ಸುಗ್ಗಿ ಸಮಯ ಕಣದ ಬಲ ಬದಿಗೆ ರಾಗಿಯ ರಾಶಿ, ಎಡ ಬದಿಯಲ್ಲೊಂದು ಕಡೆ ತೊಗರಿ, ಮತ್ತೊಂದು ಕಡೆ ಅವರೆ. ಆಳೆತ್ತರಕ್ಕೆ ಪೇರಿಸಿಟ್ಟ ಮೊರಗಳು. ಪಕ್ಕದಲ್ಲೆ ಸದಾ ಹರಿವ ಕಾಲುವೆ. ಕಣ್ಣು ಹಾಯಿದಷ್ಟು ದೂರಕ್ಕೂ ಕಾಣುವ ಹಸಿರು. ತೋಟದ ತುಂಬ ತೆಂಗು, ಹಲಸು, ಮಾವು, ಪೇರಲೆ, ಪಪ್ಪಾಯ, ಕಾಡು ಜಿರಂಗಿ ( ರಾಮಫಲ) ಸಪೋಟ, ದಾಳಿಂಬೆ, ನೆಲ್ಲಿ ಮರಗಳ ಜೊತೆಗೆ ಒಡಲ ತುಂಬ ಹೂವು ತುಂಬಿಕೊಂಡು ಬಳುಕುತ್ತ ನಿಂತ ವೈಯ್ಯಾರಿ ಸೇವಂತಿಗೆ ಗಿಡಗಳು. ಒಮ್ಮೆ ಇವನ್ನೆಲ್ಲ ಒಟ್ಟಿಗೆ ಕಂಡರೆ ಏನೋ ಹೆಮ್ಮೆ, ಹೇಳಲಾರದ ಸಂತಸ. ಸುಗ್ಗಿ ಸಮಯದಲ್ಲಿ ಮನೆ ಮಂದಿ ಎಲ್ಲ ಹೊಲದಲ್ಲಿ ಮಲಗುವುದು ವಾಡಿಕೆ. ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಹೊಲದಿಂದ ಮನೆಗೆ ಅದೂ ತಾತನ ಜೊತೆ ಹೋಗಬೇಕಾದರೆ ಆ ಮೈಕೊರೆವ ಛಳಿ, ಒಂದೆ ಸಮನೆ ಬಿಸೋ ಸುಳಿರ್ಗಾಳಿಯಲಿ ದಂಡಿ ಯಾತ್ರೆಯ ಕಥೆ( ಎಷ್ಟಾದರೂ ಗಾಂಧೀಜಿಯ ಪರಮ ಭಕ್ತ ) ಹೇಳ್ತಾ ಹೋಗುತ್ತಿದ್ದರು(ಓಡುತ್ತಿದ್ದರು. ಅವರ ನಡಿಗೆ ನನ್ನ ಓಟ) ನನಗೊ ಮನಸ್ಸು ಪೂರ ದಾರಿಯಲ್ಲಿ ಸಿಗುವ ಎಲಚೆ ಮರದಲ್ಲಿ ಸಿಗುವ ಎಲಚೆ ಹಣ್ಣುಗಳ ಹೆಕ್ಕುವ ಚಿಂತೆ. ಮನವನರಿಯವರಂತೆ ಮರ ಬರುತ್ತಿದ್ದಂತೆ ಹಣ್ಣಗಳು ತುಂಬಿದ್ದ ಕೊಂಬೆಯ ಕೆಳಗೆ ಪಂಚೆ ಹಾಸಿ ನಿರ್ಧಾರಕ್ಕೆ ಮರವ ಹತ್ತಿ ಕೊಂಬೆಯನೊಮ್ಮೆ ಅಲುಗಿಸಿದರೆ ಆ ದಿನದ ಬಹು ಮುಖ್ಯವಾದ ಕೆಲಸ ಮುಗಿಸಿದ ಹೆಮ್ಮೆ ಅವರಿಗೆ. ಗೆಳತಿಯರೊಡನೆ ಹಂಚಿ ತಿನ್ನುವ ಸಂಭ್ರಮ ನನಗೆ. ತತ್..... ಎಲಚೆ ಹಣ್ಣು ಅಂದ್ರೆ ಸಾಕು ಈ ಮನಸ್ಸು ಮತ್ತಲ್ಲಿಗೆ ಹೋಗುತ್ತೆ. ಮತ್ತೆ ವಿಷಯಕ್ಕೆ ಬರ್ತಿನಿ. ಬಾಳೆ ಬಲಕ್ಕೆ ಬಿಡು, ಸೀಬೆ ಎಡಕ್ಕೆ ಬಿಡು, ನಟ್ಟ ನಡುವಿನಲ್ಲಿ ನೀ ಹೋಗೊ ಬಳೆಗಾರ ಅಂತ ಬಳೆಗಾರನಿಗೆ ಹೇಳಿದನ್ನ ಕೇಳಿರ್ತಿರ ಬಳೆಗಾರ ಹೋಗಿದ್ನೊ ಇಲ್ವೊ ಗೊತ್ತಿಲ್ಲ ಮನೆ ಸೇರಬೇಕು ಅಂದ್ರೆ ನಡುವಿನಲ್ಲೆ ನಾ ಬರಬೇಕಿತ್ತು. ಮುಂದೆ ಬಂದರೆ ದಾರಿಯಿಲ್ಲ ಹೊಲದಿಂದಲೇ ಹಾದು ಬರಬೇಕು. ಮಂಜಿನಲ್ಲಿ ಮಿಂದೆದ್ದ ರಾಗಿಯ ತೆನೆಗಳು ಮುತ್ತಿಡುವುದಕ್ಕೆ ನೀ ಮುಂದು,ನಾ ಮುಂದು ಅನ್ನೊ ಸ್ಪರ್ಧೆ. ಹಾಗೆ ಸಾಗಿ ಮುಂದೆ ಬಂದರೆ ಕರ್ಣ ಕಠೋರವಾದ ದನಿ. ನಾವು ಕ್ಷೇಮವಾಗಿರಬೇಕಾದರೆ ಒಂದು ಕಲ್ಲುಗಳ ಚೀಲ ಇಲ್ಲ ಸಾಕಷ್ಟು ದಪ್ಪ ಹಾಗೂ ಉದ್ದವಾದ ಕೋಲು ಪ್ರತಿಯೊಬ್ಬರ ಕೈಲೂ ಇರಲೇಬೇಕು. ಕಾಡು ನಾಯಿಗಳ ಕಾಟ, ಒಮ್ಮೆಲೆ ಹದಿನೈದರಿಂದ ಇಪ್ಪತ್ತು ನಾಯಿಗಳು ದಾಳಿ ಮಾಡುತ್ತವೆ. ಅವುಗಳ ಜೊತೆ ಹೊರಾಟ ಮಾಡಿ ಏದುಸಿರು ಬಿಡುತ್ತಾ ಮುಂದೆ ಬಂದರೆ ಕಣ್ಣಿಗೆ ಹಬ್ಬ.
ಆಗ ತಾನೆ ಭುವಿಗಿಣುಕುವ ಸೂರ್ಯನ ಕಿರಣಗಳಿಗೆ ನಾಚಿ ನೀರಾದ ಬಗೆ ಬಗೆ ಬಣ್ಣದ(ಬಿಳಿ, ನೀಲಿ, ಲೈಟ್ ಪಿಂಕ್, ಡಾರ್ಕ್ ಪಿಂಕ್) ಕಮಲಗಳ ಅರೆ ಬಿರಿದ ಮೊಗ್ಗುಗಳ ನೋಡುವುದೆ ಚೆಂದ. ಅದೃಷ್ಟವಿದ್ದರೆ ಕೆಲವೊಮ್ಮೆ ಅವುಗಳ ಸುತ್ತಲೂ ಆಡುವ ಮೀನಿನ ಮರಿಗಳ ದಂಡು ಕಾಣುತ್ತದೆ. ಹಿನ್ನೆಲೆಯಲ್ಲಿ ಕೋಗಿಲೆಯ ಸುಪ್ರಭಾತ ಕೇಳುತ್ತಿರೆ. ಭುವಿಯ ಸ್ವರ್ಗ ನಮ್ಮೂರ ಕೆರೆದಂಡೆ ಅನ್ನಿಸದಿರುತ್ತಿರಲಿಲ್ಲ. ಅರೆ ಆಗಲೇ ಓಣಿಯ ಹುಣಸೆ ಮರ ಬಂದೆ ಬಿಡ್ತು. ಎದುರಿಗೆ ಹನುಮ ಈ ದಿನದ ಹೂವಿಗಾಗಿ ಕಾದಿರುವೆ ಬೇಗ ಬಾ ಎನುತ್ತಿದ್ದ ನಸುನಗುತ. ಊರಿನೊಳಗೆ ಕಾಲಿಡುತ್ತಿದ್ದಂತೆ ದಾರಿಯ ಬಲಕ್ಕೆ ಸಾಲು ಸಾಲು ಹೆಂಚಿನ ಮನೆಗಳಾದರೆ ಬಲಕೆ ರಾಸುಗಳ ದಂಡು. ಮನೆಗೆ ಬರುತ್ತಲೆ ಮುಗುಳ್ನಗುತ್ತ ಸ್ವಾಗತಿಸುವ ಮಲ್ಲಿಗೆ ಬಳ್ಳಿ, ಮತ್ತೇರಿಸುವ ಸುವಾಸನೆ, ಬುಟ್ಟಿ ತುಂಬಿದರೂ ಅವಳೊಡಲು ಬರಿದಲ್ಲ. ಅಜ್ಜಿ ಕಟ್ಟುತ್ತಿದ್ದ ದಪ್ಪನೆಯ ಹೂ ದಿಂಡಿನಲ್ಲಿ ಒಂದು ಮೊಳ ನನಗೆ, ನಾಲ್ಕು ಮೊಳ ಹನುಮನಿಗೆ "ಅದೆಂಥಾ ಹಬ್ಬದ ದಿನವಾದ್ರೂ ಸರಿ, ನಾಲ್ಕೈದು ಮನೆಯವರು ಕೊಯ್ದರೂ ಸರಿ, ನರಸಮ್ಮ ನಿನ್ ಮನೆ ಮಲ್ಗೆಗಿಡ ಮಾತ್ರ ಬರ್ದಾಗಲ್ಲ" ಎನುತ ಬೆಳಿಗ್ಗೆ ಮನೆಗಾಗಮಿಸುವ ಅತಿಥಿ ಹೂ ಮಾರೊ ಲಕ್ಷ್ಮಮ್ಮ. (ನಮ್ಮ ಮನೆಯಿಂದ ಹನುಮನಿಗೆ ಹೂ ತಲುಪಿಸವ ಕೆಲಸ ಅವರದ್ದೆ) ಐದೂವರೆಗೆಲ್ಲ ನಮಗಿನ್ನು ತಿಂಡಿ ಕೊಟ್ಟಿಲ್ಲ ಡ್ಯೂಟಿಗೆ ಟೈಮಾಯ್ತು ಅಂತ ಮನೆ ಮುಂದೆ ಚಿವ್ ಚಿವ್ ಸದ್ದು ಮಾಡೋ ಗುಬ್ಬಚ್ಚಿಗಳ ಹಿಂಡು. ಅಡುಗೆ ಮನೆಯಿಂದ ಕಾಫಿಯ ಘಮಲು ಬರವುದೆ ತಡ ಕಿಟಕಿಗೆ ಹಾರಿ ಬಂದು ಅಮ್ಮಾ ಅಂತ ಕರೆಯೊ ಕೋಳಿ (ಮನೆಲಿದ್ದ ಕೆಂಪು ಹುಂಜ ಅಮ್ಮಾ ಅಂತ್ಲೆ ಕರೆಯುತ್ತಿತ್ತು) ಕಾಫಿ ಹೀರುತ್ತ ಮನೆಯಾಚೆಯಿಂದ ಚಪ್ಪಡಿ ಕಲಿನ ಮೇಲೆ ಕುಳಿತರೆ. ಅಂಬಾ ಅಂತ ಪ್ರೀತಿಯಿಂದ ಮಾತಾಡಿಸ್ತಿದ್ದ ಬೋಡಿ (ನಮ್ಮನೆ ಹಸು) ತೆಂಗಿನ ಮರದಲ್ಲೆ ಕುಳಿತು ಮುಂಜಾನೆಯ ಶುಭಾಶಯ ಹೇಳ್ತಿದ್ದ ಗೊರವಂಕ.
ಲಕ್ಷ್ಮೀ........ ಅಜ್ಜಿ ಕರೀತಿದಾರೆ ಮತ್ತೆ ಸಿಗ್ತೀನಿ ಡೈರಿಗೆ ಹಾಲು ತಗೊಂಡ್ಹೋಗೊಕ್ ಲೇಟಾಯ್ತು.
(ಆ ದಿನಗಳನ್ನು (2002-2005) ಸಂಪೂರ್ಣವಾಗಿ ಕಟ್ಟಿಕೊಡಲಾಗದಿದ್ದರೂ ಆ ದಿನಗಳನ್ನ ಮತ್ತೆ ನೆನೆಯುವ ಒಂದು ಚಿಕ್ಕ ಪ್ರಯತ್ನ. )

Comments
Post a Comment